ವಿಯನ್ನ
	ಮಧ್ಯಯುರೋಪಿನ ಆಸ್ಟ್ರಿಯ ದೇಶದ ರಾಜಧಾನಿ. ಆಸ್ಟ್ರಿಯದ ಈಶಾನ್ಯದ ಲೋಯರ್ ಆಸ್ಟ್ರಿಯ ವಿಭಾಗದ ಆಡಳಿತ ಕೇಂದ್ರ ಮಹಾನಗರ. ಡ್ಯಾನ್ಯೂಬ್ ನದಿಯ ದಕ್ಷಿಣ ದಂಡೆಯಲ್ಲಿರುವ ಈನಗರ ವಿಸ್ತೀರ್ಣ 415 ಚ.ಕಿಮೀ. ಜನಸಂಖ್ಯೆ 15,39,858.

	ಆಸ್ಟ್ರಿಯದ ಉತ್ತರದಲ್ಲಿ ಆಲ್ಫ್ಸ್ ಮತ್ತು ಕಾರ್ಪೇತಿಯನ್ ಪರ್ವತಗಳ ನಡುವಿನ ಕಿರಿದಾದ ಮೈದಾನದಲ್ಲಿರುವ ವಿಯನ್ನ ಸಮುದ್ರಮಟ್ಟದಿಂದ 550 ಮೀ ಎತ್ತರದಲ್ಲಿದ್ದು ಇದಕ್ಕೆ ಡ್ಯಾನ್ಯೂಬ್ ನದಿಯ ಪ್ರವಾಹದಿಂದ ರಕ್ಷಿಸಲು ಕಾಲುವೆ ನಿರ್ಮಿಸಲಾಗಿದೆ. ಈ ನದಿ ಮತ್ತು ಕಾಲುವೆಯ ನಡುವಿನ ಪ್ರದೇಶವನ್ನು ಕ್ರೀಡಾ ಚಟುವಟಿಕೆಗಳಿಗೆ ಮೀಸಲಾಗಿಟ್ಟಿದೆ. ಇಂದಿನ ರಾಜಕೀಯದಲ್ಲಿ ಪ್ರತಿಷ್ಠೆಯ ನಗರವಾಗಿದ್ದು ಅಂತಾರಾಷ್ಟ್ರೀಯ ಸಂಧಾನ ಸಭೆಗಳು, ರಾಜಕೀಯ ವಿಷಯಗಳ ಬಗ್ಗೆ ನಡೆಯುವ ಸಭೆಗಳಿಗೆ ಈ ನಗರ ಪ್ರಸಿದ್ಧ.

	ಇತಿಹಾಸ: ವಿಯನ್ನ ಹಲವು ಚಾರಿತ್ರಿಕ ಘಟನೆಗಳ ಹಿನ್ನೆಲೆ ಹೊಂದಿದೆ. 1273ರಲ್ಲಿ ಹ್ಯಾಟ್ಸ್ ಮನೆತನದ ಆಳಿಕೆಯಲ್ಲಿ ಪವಿತ್ರ ರೋಮನ್ ಸಾಮ್ರಾಜ್ಯದ ರಾಜಧಾನಿಯಾಗಿ ಮಾಡಿಕೊಂಡು ಅಭಿವೃದ್ಧಿ ಹೊಂದಿತು. ಈ ನಗರವನ್ನು ತುರ್ಕರು 1529ಮತ್ತು 1683ರಲ್ಲಿ ಆಕ್ರಮಿಸಿಕೊಂಡರು. ಒಂದನೆಯ ಮಹಾಯುದ್ಧದ ತರುವಾಯ ವಿಯನ್ನ ಆಸ್ಟ್ರಿಯದ ರಾಜಧಾನಿಯಾಯಿತು. 1938ರಿಂದ 1945ರವರೆಗೆ ಇದು ಜರ್ಮನರ ವಶದಲ್ಲಿತ್ತು. ಎರಡನೆಯ ಮಹಾಯುದ್ಧದಲ್ಲಿ ಇದು ಸಾಕಷ್ಟು ಹಾನಿಗೆ ಒಳಗಾಯಿತು. ತರುವಾಯ ಒಂದು ದಶಕದ ಅವಧಿಯಲ್ಲಿ ಬ್ರಿಟಿಷ್, ಫ್ರೆಂಚ್, ಅಮೆರಿಕನ್ ಮತ್ತು ಸೋವಿಯತ್ ಆಳ್ವಿಕೆಯಲ್ಲಿತ್ತು. 1955ರಲ್ಲಿ ಆಸ್ಟ್ರಿಯ ಸ್ವತಂತ್ರವಾದಾಗ ಮತ್ತೆ ಅದು ದೇಶದ ರಾಜಧಾನಿಯಾಯಿತು. ಈ ಎಲ್ಲ ಘಟನಾವಳಿಗಳ ನಡುವೆಯೂ ಪೂರ್ತಿ ಹಾನಿಗೆ ಒಳಗಾಗದೆ ತನ್ನ ಮೂಲ ಸ್ವರೂಪವನ್ನು ಉಳಿಸಿಕೊಳ್ಳುವುದರ ಜೊತೆಗೆ ಆಧುನೀಕರಣಗೊಂಡು ಪ್ರೇಕ್ಷಣೀಯ ನಗರವಾಗಿ ಉಳಿಯಿತು.

	ವಾಯುಗುಣ: ವಾಯುಗುಣ ಹಿತಕರ. ಬೇಸಗೆಯಲ್ಲಿ ಮಳೆ, ಚಳಿಗಾಲದಲ್ಲಿ ಹಿಮವೃಷ್ಟಿ ಸಾಮಾನ್ಯ. ವಾರ್ಷಿಕ ಸರಾಸರಿ ಉಷ್ಣಾಂಶ 100ಸೆ. ಸಾಧಾರಣ ಮಳೆ 66 ಸೆಂಮೀ. ಚಳಿಗಾಲಕ್ಕಿಂತ ಬೇಸಗೆಯಲ್ಲಿ ಮಳೆ ಹೆಚ್ಚು.

	ಜನಾಂಗ ಮತ್ತು ಭಾಷೆ: ಬೇರೆಡೆಯಿಂದ ವಲಸೆ ಬಂದವರ ಸಂಖ್ಯೆ ಸಾಕಷ್ಟಿರುವುದರಿಂದ ವಿಯನ್ನದಲ್ಲಿ ವಿವಿಧ ಜನಾಂಗಗಳ ಹಾಗೂ ಸಂಸ್ಕøತಿಗಳ ಮಿಶ್ರಣವಿದೆ. ಭಾಷೆಯಲ್ಲಿಯೂ ವೈವಿಧ್ಯವಿದೆ. ರೋಮನ್, ಫ್ರೆಂಚ್, ಇಟಾಲಿಯನ್, ಸ್ಪ್ಯಾನಿಷ್, ತುರ್ಕರು ಹಾಗೂ ಸ್ಲಾವಿಯನ್ನರು ಆಳ್ವಿಕೆಯ ಕಾಲದಲ್ಲಿ ಬೇರೆ ಬೇರೆ ಭಾಷೆಗಳು ಬೆಳೆದುವು. ಮೂಲ ಭಾಷೆಯೇ ಗೌಣವಾಗಿದೆ.

	ಧರ್ಮ: ಕ್ರೈಸ್ತಧರ್ಮ ಪ್ರಧಾನ. ನಗರದ ಜನಸಂಖ್ಯೆಯ 2/3ರಷ್ಟು ಮಂದಿ ರೋಮನ್ ಕೆಥೊಲಿಕರು. ಪ್ರಾಟೆಸ್ಟಂಟ್‍ರು ಅಲ್ಪಸಂಖ್ಯಾತರು. ನಿರ್ದಿಷ್ಟ ಧರ್ಮವಿಲ್ಲದವರೂ ಇದ್ದಾರೆ.

	ಆರ್ಥಿಕವ್ಯವಸ್ಥೆ: ವಿಯನ್ನ ಆಸ್ಟ್ರಿಯದ ಪ್ರಸಿದ್ಧ ಕೈಗಾರಿಕಾ ಮತ್ತು ವ್ಯಾಪಾರ ಕೇಂದ್ರ. ಯಂತ್ರೋಪಕರಣ, ವಿದ್ಯುದುಪಕರಣ, ರಾಸಾಯನಿಕ ವಸ್ತುಗಳು, ಸಾರಿಗೆ ಉಪಕರಣ, ಲೋಹಆಧಾರಿತ ಕೈಗಾರಿಕೆ, ರೇಷ್ಮೆ, ರತ್ನಗಂಬಳಿ, ಕುಂಭಕಲಾವಸ್ತುಗಳು, ವೈಜ್ಞಾನಿಕ ಉಪಕರಣ, ಸಂಗೀತ ಸಲಕರಣೆ, ಗಡಿಯಾರ, ಚರ್ಮದ ವಸ್ತು, ಕಾಗದ ಮುಂತಾದ ಕೈಗಾರಿಕೆಗಳಿವೆ.

	ವಿಯನ್ನದಲ್ಲಿ ಉತ್ತಮ ಹಾಗೂ ದಕ್ಷ ಸಾರಿಗೆ ಸೌಲಭ್ಯವಿದೆ. ಇದೊಂದು ಅಂತಾರಾಷ್ಟ್ರೀಯ ವ್ಯಾಪಾರ ಕೇಂದ್ರ. ಪ್ರತಿವರ್ಷ ಮಾರ್ಚ್/ಸೆಪ್ಟೆಂಬರ್‍ಗಳಲ್ಲಿ ಎರಡು ಅಂತಾರಾಷ್ಟ್ರೀಯ ವ್ಯಾಪಾರ ಮೇಳಗಳು ನಡೆಯುತ್ತವೆ.

	ಆಡಳಿತ ಮತ್ತು ಸಾಮಾಜಿಕ ಪರಿಸ್ಥಿತಿ: ಆಡಳಿತದ ದೃಷ್ಟಿಯಿಂದ ನಗರವನ್ನು 23 ವಿಭಾಗಗಳಾಗಿ ವಿಂಗಡಿಸಲಾಗಿದೆ. ವಿಯನ್ನದ ಮಧ್ಯ ಭಾಗದಲ್ಲಿ ಐತಿಹಾಸಿಕ ಹಾಗೂ ಪುರಾತನ ಕಟ್ಟಡಗಳೂ ಸ್ಮಾರಕಗಳೂ ಉದ್ಯಾನಗಳೂ ಇವೆ. ಅನೇಕ ಅರಮನೆಗಳು, ಚರ್ಚ್‍ಗಳು ವಿಶ್ವವಿದ್ಯಾಲಯ, ಗ್ರಂಥಾಲಯ, ವಸ್ತುಸಂಗ್ರಹಾಲಯ ಹಾಗೂ ವಾಣಿಜ್ಯ ಸಂಕೀರ್ಣಗಳಿವೆ. ಇಲ್ಲಿಯ ಸೇಂಟ್ ಸ್ಟೀಫನ್ ಕತಿಡ್ರಲ್ ಯುರೋಪಿನ ಪ್ರಮುಖ ಗಾತಿಕ್ ಶೈಲಿಯ ಭವ್ಯಕಟ್ಟಡ.

	ರಸ್ತೆಗಳ ಜಾಲ ಇಡೀ ನಗರದ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಪ್ರಮುಖ ಬೀದಿಗಳ ಬದಿಗಳುದ್ದಕ್ಕೂ ಬೃಹತ್ ಕಟ್ಟಡಗಳು ನಿರ್ಮಾಣಗೊಂಡಿವೆ.

	ವಿಯನ್ನ ಪ್ರಸಿದ್ಧ ಶಿಕ್ಷಣ ಕೇಂದ್ರ. ಆಸ್ಟ್ರಿಯದ 12 ವಿಶ್ವವಿದ್ಯಾಲಯ ಗಳಲ್ಲಿ 5 ಈ ನಗರದಲ್ಲಿವೆ. ಅವು ತಂತ್ರಜ್ಞಾನ, ವೈದ್ಯ, ಕಾನೂನು, ಕೃಷಿವಿಜ್ಞಾನ, ಪಶುಸಂಗೋಪನೆ, ಕಲೆ, ಸಾಹಿತ್ಯ, ಸಂಗೀತ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿವೆ. ಹಲವು ಶತಮಾನಗಳಿಂದ ಸಂಗೀತ-ನಾಟಕಗಳು ವಿಯನ್ನದ ಜನರಲ್ಲಿ ಹಾಸುಹೊಕ್ಕಾಗಿವೆ. ವಿಯನ್ನ ಜಗತ್ಪ್ರಸಿದ್ಧ ಕಲಾಕಾರರನ್ನು ಪ್ರೋತ್ಸಾಹಿಸಿದೆ. ಕಲಾವಿದರು ಹುಟ್ಟಿ ಬೆಳೆದ ಕೇಂದ್ರವಿದು. ಇಲ್ಲಿ ಮನಮೋಹಕವಾದ ಚಿತ್ರಕಲೆ, ಕೆತ್ತನೆ, ಕುಶಲಕಲೆಗಳ ಸಂಗ್ರಹಾಲಯಗಳಿವೆ. ಇದು ಪ್ರಖ್ಯಾತ ವಾಸ್ತುಶಿಲ್ಪಿಗಳ, ಬರೆಹಗಾರರ, ವಿಜ್ಞಾನಿಗಳ, ವಾಣಿಜ್ಯೋದ್ಯಮಿಗಳ ತವರಾಗಿದೆ. ಇಲ್ಲಿನ  ಅರಮನೆಯ ಆವರಣದಲ್ಲಿರುವ ಶೋನ್‍ಬ್ರನ್ ಮೃಗಾಲಯ 1752ರಲ್ಲಿ ಪ್ರಾರಂಭವಾದ ಪ್ರಪಂಚದ ಪ್ರಪ್ರಥಮ ಮೃಗಾಯವಾಗಿದೆ. ವಿಯನ್ನ ಇಂದು ಪ್ರಪಂಚದ ಆಧುನಿಕ ಮಹಾನಗರ. ರೈಲು, ರಸ್ತೆ, ವಿಮಾನಗಳ ಸಂಪರ್ಕವಿರುವ ಒಂದು ಕಲಾಕೇಂದ್ರ, ವಿವಿಧ ಸಂಘ ಸಂಸ್ಥೆಗಳ ಕಚೇರಿಗಳೂ ಪ್ರಪಂಚ ಅಣುಶಕ್ತಿ ಕೇಂದ್ರ ನಿಯಂತ್ರಣ ಮಂಡಳಿ ಕಚೇರಿ, ವಿಶ್ವಸಂಸ್ಥೆಯ ಕಚೇರಿ ಮುಂತಾದವುಗಳಿವೆ. ಫ್ರಾನ್ಸ್ ಚಕ್ರವರ್ತಿ ನೆಪೋಲಿಯನ್ನನ ಪತನಾನಂತರ ನಡೆದ 1814-15ರ ವಿಯನ್ನ ಕಾಂಗ್ರೆಸ್ 25 ವರ್ಷಗಳ ಸತತ ಯುದ್ಧದ ಅನಂತರ ಯುರೋಪಿನಲ್ಲಿ ಶಾಂತಿ ನೆಲಸುವಂತೆ ಮಾಡಿ ವಿಯನ್ನದ ಪ್ರತಿಷ್ಠೆಯನ್ನು ಹೆಚ್ಚಿಸಿತು.			
	(ಪಿ.ಎಮ್.ಪಿ.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ